ಸಲ್ಲದ ಮಾತು ಆಡಿ ವಿವಾದ ಸುತ್ತಿಕೊಂಡ ತಮಾಟಗಾರ

Advertisement

ಹುಬ್ಬಳ್ಳಿ: ಜೈಲಲ್ಲಿದ್ದವರ ಬಿಡಿಸುವ ಭರವಸೆ ಹಾಗೂ ಶಾಸಕ ಅಬ್ಬಯ್ಯನವರ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡ ಇಸ್ಮಾಯಿಲ್ ತಮಟಗಾರ ಆಡಿದ ಲಘು ಮಾತಿನ ಆಡಿಯೋ ವ್ಯಾಪಕ ವೈರಲ್ ಆಗಿದ್ದು, ಕಾಂಗ್ರೆಸ್ ಪಾಳೆಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ಶಾಸಕರ ಬಗ್ಗೆ ಒಬ್ಬ ಮುಖಂಡ ಈ ರೀತಿ ಹೇಳಿಕೆ ನೀಡಿದರೆ ಹೇಗೆ ಎಂಬ ಚರ್ಚೆ ನಡೆಯುತ್ತಿರುವುದು ತಮಾಟಗಾರ ತಮಗೆ ತಾವೇ ವಿವಾದ ಸುತ್ತಿಕೊಂಡಂತಾಗಿದೆ.
ಜೈಲಿನಲ್ಲಿರುವ ತಮಗೇ ಬೇಕಾದವರನ್ನು ಹೇಗಾದರೂ ಮಾಡಿ ಬಿಡಿಸಿಕೊಡಿ ಎಂದು ವ್ಯಕ್ತಿಯೊಬ್ಬ ಕೇಳಿಕೊಂಡಾಗ ಅದಕ್ಕೆ ಪ್ರತಿಕ್ರಿಯಿಸುವ ವೇಳೆ ಇಸ್ಮಾಯಿಲ್ ತಮಾಟಗಾರ, ಪ್ರಸಾದ ಗಿಸಾದ ವೋ ಸಬಿ ಬಿಜೆಪಿ ಕಾ ಏಜೆಂಟರ್ ಎಂದು ಹೇಳಿರುವುದು ಶಾಸಕ ಅಬ್ಬಯ್ಯ ಅವರಿಗೆ ಇರಲಿ, ಶಾಸಕರ ಆಪ್ತ ವಲಯದವರಿಗಿರಲಿ, ಕಾಂಗ್ರೆಸ್ ಮುಖಂಡರಿಗೇ ಅಚ್ಚರಿಯಾಗಿದೆ. ತೆರೆಮರೆಯಲ್ಲಿ ಮುಖಂಡರಾದವರೇ ಇನ್ನೊಬ್ಬ ನಾಯಕರ ಬಗ್ಗೆ ಹೀಗೆಲ್ಲ ಮಾತನಾಡಿದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಪ್ರಸಾದ ಅಬ್ಬಯ್ಯ, ಇಸ್ಮಾಯಿಲ್ ತಮಾಟಗಾರ ಅವರಿಗೆ ಕಾಂಗ್ರೆಸ್ ಸಂಸ್ಕೃತಿ ಗೊತ್ತಿಲ್ಲ. ಅವರೆಲ್ಲ ಅವಕಾಶವಾದಿಗಳು. ಅವರಿಗೆ ಕಾಂಗ್ರೆಸ್ ಪಕ್ಷ ಅಂದರೆ ಏನು, ಅದರ ನಾಯಕತ್ವದ ಬಗೆಗೆ ಯಾವುದೇ ಅರಿವಿಲ್ಲ. ಎಲ್ಲಿಂದಲೋ ಬರುತ್ತಾರೆ, ಎಲ್ಲೋ ಹೋಗುತ್ತಾರೆ. ಅಂಥವರ ಬಗ್ಗೆ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಂತಹ ನೂರು ಜನ ಹೇಳಿದರೂ ಏನೂ ಆಗಲ್ಲ. ಅವಕಾಶವಾದಿಗಳ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸಲಾರೆ. ಅಲ್ಲದೇ, ಅವರು ಕಾಂಗ್ರೆಸ್ ಪಕ್ಷದ ತಳಮಟ್ಟದಿಂದ ಬಂದವರಲ್ಲ. ಅವರ ಬಗ್ಗೆ ಮಾತನಾಡುವುದೇ ವೇಸ್ಟ್ ಎಂದು ತಮ್ಮ ಘನತೆಗೆ ತಕ್ಕಂತೆ ಪ್ರತಿಕ್ರಿಯಿಸಿದ್ದಾರೆ.
ಜೋಶಿ ವಾಗ್ದಾಳಿ: ಬೇಲ್ ಮೇಲೆ ಬಿಡಿಸಿಕೊಂಡು ಬರುವುದು, ಬಿಡುವುದು ಕಾನೂನಾತ್ಮಕವಾಗಿ ಏನಿದೆಯೋ ಅದನ್ನು ಮಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಎಷ್ಟೇ ಕೋಟಿ ಆದರೂ ಚಿಂತೆ ಇಲ್ಲ. ಬಿಡಿಸಿಕೊಂಡು ಬರುತ್ತೇನೆ ಎಂಬ ಇಸ್ಮಾಯಿಲ್ ತಮಾಟಗಾರ ಹೇಳಿಕೆ ದುಡ್ಡಿನ ಅಹಂಕಾರ ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ಧಾರವಾಡದಲ್ಲಿ ಪ್ರತಿಕ್ರಿಯಿಸಿದ್ದರು.