ಕೋವಿಡ್ ನಿಯಮ ಪಾಲಿಸಿ, ಇಲ್ಲಾ ಜೋಡೋ ಯಾತ್ರೆ ನಿಲ್ಲಿಸಿ: ರಾಹುಲ್‌ ಗಾಂಧಿಗೆ ಕೇಂದ್ರ ಆರೋಗ್ಯ ಸಚಿವರ ಪತ್ರ

Advertisement

ನವದೆಹಲಿ: ಚೀನಾದಲ್ಲಿ ಕೋವಿಡ್‌ ಉಲ್ಬಣಗೊಂಡಿದ್ದು, ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಈ ಮಾರ್ಗಸೂಚಿಗಳ ಪಾಲನೆಗೆ ದೇಶದ ಜನತೆಯಲ್ಲಿ ಮನವಿ ಮಾಡಲಿದೆ ಎನ್ನಲಾಗಿದೆ.
ಈ ಮಧ್ಯೆ, ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ತಮ್ಮ ಭಾರತ್‌ ಜೋಡೋ ಯಾತ್ರೆಯನ್ನು ರದ್ದುಗೊಳಿಸುವಂತೆ ಕೋರಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್‌ ಮಾಂಡವೀಯ ಪತ್ರ ಬರೆದಿದ್ದಾರೆ.
ʻಭಾರತ್ ಜೋಡೋ ಯಾತ್ರೆ’ಯಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದಲ್ಲಿ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಯಾತ್ರೆಯನ್ನು ಮೊಟಕುಗೊಳಿಸಿ..’ ಎಂದು ರಾಹುಲ್‌ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ, ಮನ್ಸೂಖ್‌ ಮಾಂಡವೀಯ ಮನವಿ ಮಾಡಿಕೊಂಡಿದ್ದಾರೆ.
ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ಬಳಿಕ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರಿಗೆ ಕೋವಿಡ್‌ ಸೋಂಕು ತಗುಲಿದೆ ಎಂಬ ಐವರು ಬಿಜೆಪಿ ಸಂಸದರ ಪತ್ರವನ್ನೂ, ಕೇಂದ್ರ ಆರೋಗ್ಯ ಸಚಿವ ಮನ್ಸೂಖ್‌ ಮಾಂಡವೀಯ ಅವರು ರಾಹುಲ್‌ ಗಾಂಧಿ ಅವರಿಗೆ ಬರೆದಿರುವ ಪತ್ರದೊಂದಿಗೆ ಲಗತ್ತಿಸಿದ್ದಾರೆ.