ಮಂಗಳೂರು ವ್ಯಾಪಾರಿಯ ಹತ್ಯೆ: ನಿಷೇಧಾಜ್ಞೆ ಜಾರಿ

ಮಂಗಳೂರು
Advertisement

ಮಂಗಳೂರು: ಸುರತ್ಕಲ್ ಕೃಷ್ಣಾಪುರ 4ನೇ ಬ್ಲಾಕ್ ನೈತಂಗಡಿ ಬಳಿ ಕಳೆದ ರಾತ್ರಿ ನಡೆದ ದಿನಸಿ ವ್ಯಾಪಾರಿ ಜಲೀಲ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸೆಕ್ಷನ್ 144 ಕಲಂ ಜಾರಿಗೊಳಿಸಲಾಗಿದೆ.

ಜಲೀಲ್ ಮೃತದೇಹದ ಅಂತ್ಯಕ್ರಿಯೆ ಕೂಳೂರು ಪಂಜಿಮೋಗರುವಿನಲ್ಲಿ ನಡೆಯಲಿದೆ. ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಅಂಗಡಿ-ಮುಂಗಟ್ಟು ಬಂದ್ ಆಗಿವೆ. ಪಣಂಬೂರು ಬಜ್ಪೆ ಕಾವೂರು ಸ್ಟೇಷನ್ ವ್ಯಾಪ್ತಿಯಲ್ಲಿ ಡಿಸೆಂಬರ್ 27ರ ಬೆಳಿಗ್ಗೆ 6 ರ ತನಕ ನಿಷೇಧಾಜ್ಞೆ ವಿಧಿಸಲಾಗಿದೆ.

ಬೈಕ್ ನಲ್ಲಿ ಬಂದ ಮುಸುಕುಧಾರಿ ದುಷ್ಕರ್ಮಿಗಳು ಜಲೀಲ್‌ನನ್ನು ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ನೈತಂಗಡಿಯಲ್ಲಿ ದಿನಸಿ ಅಂಗಡಿ ಹೊಂದಿರುವ ಕೃಷ್ಣಾಪುರ ನಿವಾಸಿ ಜಲೀಲ್ ಕೊಲೆಯಾಗಿದ್ದರು. ಜಲೀಲ್ ಅವರು ಕೃಷ್ಣಾಪುರದಲ್ಲಿ ಹೊಂದಿದ್ದ ಅಂಗಡಿಗೆ ನುಗ್ಗಿದ್ದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಶನಿವಾರ ರಾತ್ರಿ ಅವರಿಗೆ ಚೂರಿಯಿಂದ ಇರಿದಿದ್ದರು. ತಕ್ಷಣವೇ ಅಕ್ಕ ಪಕ್ಕದ ಅಂಗಡಿಯವರು ಹಾಗೂ ಸ್ಥಳೀಯರು ಸೇರಿ ಗಾಯಾಳು ಜಲೀಲ್ ಅವರನ್ನು ಮುಕ್ಕದ ಶ್ರೀನಿವಾಸ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಅದಾಗಲೇ ಅವರು ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದರು.