ಪ.ಜಾತಿ, ಪ.ಪಂಗಡ ಕಲ್ಯಾಣಕ್ಕಾಗಿ ಕೇವಲ 21 ಸಾವಿರ ಕೋಟಿ ಘೋಷಣೆ

Advertisement

ಕುಷ್ಟಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಎಸ್‌ಟಿಪಿ ಯೋಜನೆಯಲ್ಲಿ 29 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು. ಆದರೆ, ಸಿಎಂ ಬಸವರಾಜ ಬೊಮ್ಮಯ್ಯ ಅವರ ಸರ್ಕಾರ ಬಜೆಟ್‌ನಲ್ಲಿ ಕೇವಲ 21 ಸಾವಿರ ಕೋಟಿ ರೂ.ಗಳನ್ನು ಘೋಷಿಸಿದೆ. ಈ ವಿಷಯವನ್ನು ಪ್ರಶ್ನೆ ಮಾಡಬೇಕಾದ ನಮ್ಮ ಸಮುದಾಯದ 15 ಜನ ಶಾಸಕರು ಸುಮ್ಮನೆ ಕುಳಿತುಕೊಂಡಿದ್ದಾರೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಫೆ. 8 ಮತ್ತು 9 ರಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಮಹರ್ಷಿಗಳ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಸರ್ಕಾರ 38 ಸಾವಿರ ಕೋಟಿ ರೂ. ಮೀಸಲು ಇಡಬೇಕಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಾಸಕರು ಇದನ್ನು ಕೇಳಬೇಕಾಗಿತ್ತು. ಆದರೆ ಕೇಳಲು ಸಾಧ್ಯವಾಗಿಲ್ಲ ಎಂದರು.
ವಿಧಾನ ಪರಿಷತ್ತಿನಲ್ಲಿ ಯಾದಗಿರಿ ಜಿಲ್ಲೆಯ ತಳವಾರ್ ಸಮಾಜಕ್ಕೆ ಪ್ರಮಾಣ ಪತ್ರ ವಿತರಿಸುತ್ತಿಲ್ಲ ಎಂದು ಸಭಾಪತಿಗಳನ್ನು ಪ್ರಶ್ನೆ ಮಾಡಿದ ಸಂದರ್ಭದಲ್ಲಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹಾರಿಕೆ ಉತ್ತರ ನೀಡಿದ್ದಾರೆ. ಕುಲಶಾಸ್ತ್ರ ಅಧ್ಯಯನದ ಪ್ರಕಾರ ಮುಖ್ಯಮಂತ್ರಿಗಳೇ ಕೇಂದ್ರ ಸರ್ಕಾರದ ಅಧಿಸೂಚನೆಯ ಪ್ರಕಾರ ನಾಯಕ ಮತ್ತು ವಾಲ್ಮೀಕಿ ಸಮಾಜದ ತಳವಾರರಿಗೆ ನೀಡಬೇಕು ಎಂಬುದಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದ ಹಣವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಗೋವಿಂದ ಕಾರಜೋಳ ಅವರು ಪಿಡಬ್ಲ್ಯೂಡಿ ಸೇರಿದಂತೆ ಇನ್ನಿತರ ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ನಾಯಕ, ಹನುಮೇಶ್ ನಾಯಕ್, ಮಾಲತಿ ನಾಯಕ್, ಭಾರತ ನಿರಗೇರಿ, ಮಾನಪ್ಪ, ಸಂಗಣ್ಣ ಕರಡಿ, ಚಂದಪ್ಪ ತಳವಾರ, ರಮೇಶ್ ಕೊಳ್ಳಿ, ರಮೇಶ್ ಕೊನಸಾಗರ, ಎಚ್.ವೈ. ಈಟಿ, ಚಂದ್ರಹಾಸ ಬಾವಿಕಟ್ಟಿ ಸೇರಿದಂತೆ ಇನ್ನಿತರರು ಇದ್ದರು.