ವಿದ್ಯುತ್ ಕಡಿತ: ರೈತರ ಆಕ್ರೋಶ

ವಿದ್ಯುತ್‌
Advertisement

ಪಾಂಡವಪುರ: ಸಮರ್ಪಕವಾಗಿ ವಿದ್ಯುತ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮದ ರೈತರು ಪಟ್ಟಣದ ಸೆಸ್ಕ್ ಎಇಇ ಕಚೇರಿಗೆ ಮುತ್ತಿಗೆ ಹಾಕಿ, ಇಂಜಿನಿಯರ್‌ಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಹಿರೇಮರಳಿ, ಬನಘಟ್ಟ, ಮಹದೇಶ್ವರಪುರ, ಹಾರೋಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ರೈತರಿಗೆ ಉಪಯೋಗ ಆಗುವಂತೆ ಸಮರ್ಪಕವಾಗಿ ವಿದ್ಯುತ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದ ರೈತರು, ಪಟ್ಟಣದ ಸೆಸ್ಕ್ ಕಚೇರಿಯಲ್ಲಿದ್ದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ, ಎಇಇ ಪುಟ್ಟಸ್ವಾಮಿ ಅವರಿಗೆ ಪ್ರಶ್ನಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಿರೇಮರಳಿ ಸೇರಿದಂತೆ ಇತರೆ ಗ್ರಾಮಸ್ಥರು ಸೆಸ್ಕ್ ಎಇಇ ಪುಟ್ಟಸ್ವಾಮಿ ಬಳಿ ತೆರಳಿ, ವಿದ್ಯುತ್ ಸಮಸ್ಯೆ ಬಗ್ಗೆ ಕೆಲಕಾಲ ಚರ್ಚೆ ನಡೆಸಿ, ರೈತರ ವ್ಯವಸಾಯಕ್ಕೆ ಪ್ರತಿದಿನ ಬೆಳಿಗ್ಗೆ ಸಮಯದಲ್ಲಿ ಸತತವಾಗಿ 3 ಗಂಟೆ ಕಾಲ ವಿದ್ಯುತ್ ಕಲ್ಪಿಸಬೇಕು. ಬೆಳಿಗ್ಗೆ ವಿದ್ಯುತ್ ಸೌಲಭ್ಯ ನೀಡುತ್ತಿಲ್ಲ. ಒಂದು‌‌ ವೇಳೆ ವಿದ್ಯುತ್ ಕೊಟ್ಟರೂ ಅರ್ಧ ಗಂಟೆ ಅಥವಾ ಒಂದು ಗಂಟೆ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ನಂತರ ರಾತ್ರಿ ಸಮಯದಲ್ಲಿ ವಿದ್ಯುತ್ ನೀಡುತ್ತಿದ್ದೀರಾ, ರಾತ್ರಿ ವೇಳೆ ಜಮೀನಿಗೆ ತೆರಳಿ ಬೆಳೆಗಳಿಗೆ ನೀರಿನ ವ್ಯವಸ್ಥೆ ಮಾಡಲು ಆಗುವುದಿಲ್ಲ. ರಾತ್ರಿ ವೇಳೆ ರೈತರು ಜಮೀನಿಗೆ ಹೋದಾಗ ಚಿರತೆ ದಾಳಿ ನಡೆಸಿದರೆ ಯಾರು ಹೊಣೆಗಾರರು ಎಂದು ರೈತರು ಇಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡರು.