ಬೆಂಗಳೂರು: ನಡೆದಾಡುವ ದೇವರು , ಈ ಶತಮಾನದ ಶ್ರೇಷ್ಟ ಸಂತ, ಶಾಂತಮೂರ್ತಿ
ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯರಾದ ಸಿದ್ದೇಶ್ವರ ಶ್ರೀಗಳ ಶಿವೈಕ್ಯರಾಗಿದ್ದಕ್ಕೆ ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.
ವೈಕುಂಠ ಏಕಾದಶಿಯಂದು ನಡೆದಾಡುವ ದೇವರು, ಜ್ಞಾನ ದಾಸೋಹಿಗಳು ನಮ್ಮನ್ನೆಲ್ಲ ಅಗಲಿ ವೈಕುಂಠದೆಡೆಗೆ ಪ್ರಯಾಣ ಬೆಳೆಸಿದ್ದಾರೆ, ಕೋಟ್ಯಾಂತರ ಭಕ್ತರ ಬಾಳಿಕೆ ಬೆಳಕಾದ ಅವರು, ತಮ್ಮ ಆಧ್ಯಾತ್ಮಿಕ ಪ್ರವಚನಗಳಿಂದ ಜ್ಞಾನದ ಬೀಜಗಳನ್ನು ಬಿತ್ತಿ, ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇಂದು ಶ್ರೀಗಳನ್ನು ಕಳೆದುಕೊಂಡು ಇಡೀ ದೇಶಕ್ಕೇ ತುಂಬಲಾಗದ ನಷ್ಟವಾಗಿದೆ ಎಂದು ಬಸವರಾಜ ಹೊರಟ್ಟಿ ಕಂಬನಿ ಮಿಡಿದಿದ್ದಾರೆ.
ಶ್ರೀಗಳೊಂದಿಗೆ ಹೊಂದಿದ್ದ ನಿಕಟ ಸಂಪರ್ಕ ಹಾಗೂ ಆತ್ಮೀಯತೆಯನ್ನು ನೆನಪಿಸಿಕೊಂಡ ಬಸವರಾಜ ಹೊರಟ್ಟಿ , ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಅವರ ವಿಚಾರಪೂರ್ಣ ಪ್ರವಚನಗಳು, ಚಿಂತನೆಗಳು ಸರಳ ನಡೆ ನುಡಿ, ಇಡೀ ಸಮಾಜಕ್ಕೆ ಎಲ್ಲಕಾಲಕ್ಕೂ ಮಾರ್ಗದರ್ಶಿಯಾಗಿದ್ದು ಅಜರಾಮರವಾಗಿ ಮನುಕುಲದ ಉದ್ಧಾರಕ್ಕೆ ಜ್ಞಾನ ದೀವಿಗೆಯಾಗಿವೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.