ಮೆಟ್ರೋ ಪಿಲ್ಲರ್ ಕುಸಿತದಿಂದ ತಾಯಿ-ಮಗು ಸಾವು: ತವರಲ್ಲಿ ಅಂತ್ಯ ಸಂಸ್ಕಾರ

Advertisement

ದಾವಣಗೆರೆ: ಮೆಟ್ರೋ ಕಾಮಗಾರಿಯ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪಿಲ್ಲರ್ ಕುಸಿದು ದುರ್ಮರಣಕ್ಕೀಡಾಗಿದ್ದ ತಾಯಿ ಮಗುವಿನ ಅಂತ್ಯ ಸಂಸ್ಕಾರ ಬುಧವಾರ ದಾವಣಗೆರೆಯಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ಪದ್ಧತಿಯಂತೆ ಪ್ರತ್ಯೇಕವಾಗಿ ನಡೆಯಿತು.
ತೇಜಸ್ವಿನಿ(೨೯), ಅವರ ಪುತ್ರ ವಿಹಾನ್(೨.೫) ಇವರಿಬ್ಬರು ಮಂಗಳವಾರ ಕೆಲಸ ಮುಗಿಸಿಕೊಂಡು ಪತಿಯೊಂದಿಗೆ ಬೈಕ್‌ನಲ್ಲಿ ಬೆಂಗಳೂರಿನ ನಾಗವಾರ ಬಳಿ ತೆರಳುತ್ತಿರುವ ಸಂದರ್ಭದಲ್ಲಿ ನಿರ್ಮಾಣ ಹಂತದ ೪೦ ಅಡಿ ಎತ್ತರದ ಮೆಟ್ರೋ ಪಿಲ್ಲರ್ ದೀಢಿರ್ ಕುಸಿತಗೊಂಡು ಮರದ ಮೇಲೆ ಬಿದ್ದು, ಮರ ಬೈಕ್ ಮೇಲೆ ಬಿದ್ದ ಪರಿಣಾಮ ತಾಯಿ ಮಗು ಮೃತಪಟ್ಟಿದ್ದರು.
ಮೃತ ತೇಜಸ್ವಿನಿ ತವರಾದ ದಾವಣಗೆರೆಯ ಬಸವೇಶ್ವರ ನಗರದಲ್ಲಿರುವ ನಿವಾಸಕ್ಕೆ ಮಂಗಳವಾರ ತಡರಾತ್ರಿ ಮೃತ ದೇಹಗಳನ್ನು ತಂದು ಬಂಧು-ಬಾಂಧವರು, ಆತ್ಮೀಯ ವರ್ಗದವರು ಅಂತಿಮ ದರ್ಶನ ಪಡೆದರು. ಬೆಳಿಗ್ಗೆ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಅಂತಿಮ ಪೂಜೆ ಸಲ್ಲಿಸಿದ ತರುವಾಯ ಗ್ಲಾಸ್‌ಹೌಸ್ ಬಳಿಯ ರುದ್ರಭೂಮಿಯಲ್ಲಿ ಮಗು ವಿಹಾನ್‌ನ ಅಂತ್ಯ ಸಂಸ್ಕಾರ ನೆರವೇರಿಸಿದ ಬಳಿಕ, ಪಿಬಿ ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ತಾಯಿ ತೇಜಸ್ವಿನಿ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರ, ನೆರೆಹೊರೆಯವರ ಆಕ್ರಂದನ ಮುಗಿಲುಮುಟ್ಟಿತ್ತು.

ಗುತ್ತಿಗೆದಾರರು, ಅಧಿಕಾರಿಗಳನ್ನು ಅಮಾನತು ಮಾಡಿದರೆ ಸಾಲದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು. ಇಲ್ಲದಿದ್ದರೆ ೪೦ ಪರ್ಸೆಂಟ್ ಕಮಿಷನ್ ಅಂತಾ ಜನ ಹೇಳುವ ಮಾತು ನಿಜವಾಗುತ್ತದೆ. ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್‌ಗೆ ಸೇರಿಸದಿದ್ದರೆ ವಿಧಾನ ಸೌಧದ ಮುಂದೆ ಪ್ರತಿಭಟನೆಗೆ ಕೂರುತ್ತೇನೆ. ಅಧಿಕಾರಿಗಳಿಗೆ ಶಿಕ್ಷೆಯಾದ್ರೆ ಮಾತ್ರ ಇಂತಹ ಪ್ರಕರಣದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ.

  • ಭವಾನಿ ಮದನ್, ಮೃತ ತೇಜಸ್ವಿನಿ ತಂದೆ