ಕಷ್ಟ ಎಂದು ಬಿಟ್ಟು ಬಿಡಬೇಡಿ’: ಸಿಎ ಸಾಧಕಿ ರಮ್ಯಾಶ್ರೀ

Advertisement

ಮಂಗಳೂರು: ‘ಕಷ್ಟ ಎಂದು ಬಿಟ್ಟು ಬಿಡಬೇಡಿ, ಸ್ಥಿರತೆ ಮತ್ತು ಕಠಿಣ ಪರಿಶ್ರಮದಿಂದ ಅಂದು ಕೊಂಡಿರುವ ಗುರಿ ತಲುಪಲು ಸಾಧ್ಯ’ ಹೀಗೆಂದವರು ಅಖಿಲ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯು ೨೦೨೨ರ ನವೆಂಬರ್‌ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ದೇಶದಲ್ಲಿ ದ್ವಿತೀಯ ರ‍್ಯಾಂಕ್ ಪಡೆದಿರುವ ಮಂಗಳೂರು ಹೊಸಬೆಟ್ಟಿನ ರಮ್ಯಶ್ರೀ.
‘ಸಂಯುಕ್ತ ಕರ್ನಾಟಕ’ದೊಂದಿಗೆ ಮಾತನಾಡಿದ ಅವರು, ರ‍್ಯಾಂಕ್‌ನ ನಿರೀಕ್ಷೆ ಇರಲಿಲ್ಲ. ರ‍್ಯಾಂಕ್ ಬಂದಿರುವುದು ಖುಷಿಯಾಗಿದೆ. ಹೆಸರಿನ ಮುಂದೆ ಸಿಎ ಎಂದು ಹಾಕಿಕೊಳ್ಳುವಾಗ ಸಿಗುವ ಸಂತೋಷವೇ ಬೇರೆ. ಅದನ್ನು ವರ್ಣಿಸಲು ಅಸಾಧ್ಯ. ಕೆಲ ಸಂದರ್ಭದಲ್ಲಿ ಸಿಎ ಆಯ್ಕೆಮಾಡಿಕೊಂಡದ್ದು ತಪ್ಪು ನಿರ್ಧಾರವೇ ಎಂದು ಅನಿಸಿದ್ದು ಇದೇ. ಆದರೆ ನಿರಂತರ ಶ್ರಮದಿಂದ ಗುರಿ ತಲುಪಿದಾಗ ನನ್ನ ಪರಿಶ್ರಮ ಸಾರ್ಥಕ ಎನಿಸಿತು. ಸಿಎ ಅಂತಿಮ ಪರೀಕ್ಷೆಗೂ ಮುನ್ನ ತಯಾರಿ ಅತೀ ಮುಖ್ಯ. ಪರೀಕ್ಷೆಗೆ ಕೊನೆಯ ನಾಲ್ಕು ತಿಂಗಳ ಕಾಲ ದಿನಕ್ಕೆ ಸುಮಾರು ೧೨ರಿಂದ ೧೬ ಗಂಟೆಗಳ ಕಾಲ ಓದುತ್ತಿದ್ದೆ. ಅದರಲ್ಲೂ ಅಣುಕು ಪ್ರಶ್ನೆ ಪತ್ರಿಕೆ ಪರೀಕ್ಷೆ ನಡೆಸುತ್ತಿದ್ದುದು ಉಪಯುಕ್ತವಾಯಿತು. ಅಂತಿಮ ಪರೀಕ್ಷೆಗೆ ಸ್ವಯಂ ಅಧ್ಯಯನ ನಡೆಸಿದ್ದೆ. ಸದ್ಯ ಉದ್ಯೋಗ ಮಾಡುವ ಉದ್ದೇಶ ಇದೆ. ಮುಂದೆ ವಿದ್ಯಾಭ್ಯಾಸ ಮುಂದುವರೆಸುತ್ತೇನೆ.
ಕಷ್ಟ ಎಂದು ಗುರಿಯಿಂದ ಹಿಂದೆ ಸರಿಯಬೇಡಿ, ದೇವರ ದಯೆ, ತಂದೆ ತಾಯಿಗಳ ಆಶೀರ್ವಾದ ಪ್ರೋತ್ಸಾಹ, ಉತ್ತಮ ಮಾರ್ಗದರ್ಶನ ಕಠಿಣ ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಮ್ಯಾಶ್ರೀ ಕಾಮತ್ ಆಂಡ್ ರಾವ್ ಹಾಗೂ ಎಂ.ಆರ್. ಪಿ.ಎಲ್. ಸಂಸ್ಥೆಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಎಲ್‌ಐಸಿ ಉದ್ಯೋಗಿ ರಮೇಶ್ ರಾವ್ ಮತ್ತು ನ್ಯಾಶನಲ್ ಇನ್ಸೂರೆನ್ಸ್ ಉದ್ಯೋಗಿ ಮೀರಾ ದಂಪತಿಯ ಪುತ್ರಿ.
ರಮ್ಯಾಶ್ರೀ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್, ಪಿಯುಸಿಯಲ್ಲಿ ೫ನೇ ರ‍್ಯಾಂಕ್ ಮತ್ತು ಸಿಎ ಇಂಟರ್ ಪರೀಕ್ಷೆಯಲ್ಲಿ ದೇಶದಲ್ಲಿ ೧೬ ನೇ ರ‍್ಯಾಂಕ್ ಪಡೆದಿದ್ದರು.