ಕಾವೂರು ಜಾತ್ರೆಯಲ್ಲಿ ಹಿಂದೂಗಳಿಗಷ್ಟೇ ವ್ಯಾಪಾರಕ್ಕೆ ಅವಕಾಶ ಬ್ಯಾನರ್ ಪ್ರತ್ಯಕ್ಷ: ತೆರವಿಗೆ ಸಿಪಿಎಂ, ಡಿವೈಎಫ್‌ಐ ಆಗ್ರಹ

ಹಿಂದೂ
Advertisement

ಮಂಗಳೂರು: ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಸಂತೆ ವ್ಯಾಪಾರಕ್ಕೆ ಅವಕಾಶ ಎಂದು ಸಂಘ ಪರಿವಾರದ ಹೆಸರಿನಲ್ಲಿ ಹಾಕಿರುವ ಬ್ಯಾನರ್ ತೆರವುಗೊಳಿಸುವಂತೆ ಒತ್ತಾಯಿಸಿ ಹಾಗೂ ಈ ವಿಚಾರವಾಗಿ ಬೇಜವಾಬ್ದಾರಿಯುತವಾಗಿ ವರ್ತಿಸಿದ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಪಿಎಂ ಮಂಗಳೂರು ಉತ್ತರ ಸಮಿತಿ ಮತ್ತು ಡಿವೈಎಫ್‌ಐ ಮಂಗಳೂರು ನಗರ ಸಮಿತಿಯು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಕಾವೂರು ಜಾತ್ರೆ ಇಂದಿನಿಂದ ಆರಂಭಗೊಳ್ಳಲಿದೆ. ಈ ಜಾತ್ರೆಯಲ್ಲಿ ವಿವಿಧ ಮತ ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿಗಳು ಭಾಗವಹಿಸುವುದು, ಸಂತೆ ವ್ಯಾಪಾರ ಮಾಡುತ್ತಿರುವುದು ಹಿಂದಿನಿಂದಲೂ ನಡೆದುಬಂದಿದೆ. ಆದರೆ ಜ.೧೦ ರಂದು ‘ಮುಸ್ಲಿಮ್ ಧರ್ಮದವರು ಸಂತೆ ವ್ಯಾಪಾರ ಮಾಡುವುದಕ್ಕೆ ಬಹಿಷ್ಕಾರ ಹಾಕಲಾಗಿದೆ’ ಎಂಬ ಜನಾಂಗೀಯ ನಿಂದನೆಯ ಬ್ಯಾನರ್ ಅಳವಡಿಸಲಾಗಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ, ಎಸಿಪಿಯವರ ಗಮನಕ್ಕೆ ತಂದ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು. ಆದರೆ ಶುಕ್ರವಾರ ಮತ್ತೆ ಇದೇರೀತಿ ‘ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ. ವಿಗ್ರಹಾರಾಧನೆಯನ್ನು ‘ಹರಾಂ’ ಎಂದು ನಂಬಿರುವ ಯಾರಿಗೂ ಅವಕಾಶವಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾವೂರು ಪ್ರಖಂಡ ಹೆಸರಿನಲ್ಲಿ ಬ್ಯಾನರ್ ಅಳವಡಿಸಲಾಗದೆ ಎಂದು ಮನವಿಯಲ್ಲಿ ದೂರಲಾಗಿದೆ.
ಪೊಲೀಸರಿಂದ ಬೇಜವಾಬ್ದಾರಿಯುತ ವರ್ತನೆ: ಆರೋಪ
ಮತ್ತೆ ಬ್ಯಾನರ್ ಅಳವಡಿಸಿರುವ ಬಗ್ಗೆ ಪೊಲೀಸರ ಗಮನಕ್ಕೆ ತಂದಾಗ, ‘ಅದು ದೇವಸ್ಥಾನ ಆಡಳಿತ ಸಮಿತಿಯ ತೀರ್ಮಾನ’ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ‘ಬ್ಯಾನರ್‌ನಲ್ಲಿ ಎಲ್ಲೂ ಆಡಳಿತ ಸಮಿತಿಯ ಹೆಸರಿಲ್ಲ, ಬದಲಾಗಿ ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಸಂಘಟನೆಗಳ ಹೆಸರು ಮಾತ್ರ ಇದೆ. ಬ್ಯಾನರ್ ತೆರವಿಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸುತ್ತೇವೆ’ ಎಂದಾಗ, ‘ಪ್ರತಿಭಟನೆ ಮಾಡಿ, ತೊಂದರೆ ಇಲ್ಲ’ ಎಂದು ಅದೇ ಪೊಲೀಸ್ ಸಿಬ್ಬಂದಿ ಉಡಾಫೆಯಿಂದ ಪ್ರತಿಕ್ರಿಯಿಸಿದ್ದಾಗಿ ಆರೋಪಿಸಲಾಗಿದೆ.
ಆದ್ದರಿಂದ ಜನಾಂಗೀಯ ನಿಂದನೆ ಈ ಬ್ಯಾನರ್ ಅನ್ನು ಕೂಡಲೇ ತೆರವುಗೊಳಿಸಬೇಕು, ಕಾನೂನುಬಾಹಿರ, ಕೋಮುದ್ವೇಷ, ಜನಾಂಗೀಯ ಹಿಂಸೆ, ಕೋಮುವಾದದ ಕೃತ್ಯದ ಬಗ್ಗೆ ಬೇಜವಾಬ್ದಾರಿಯುತವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.