ಬಿಜೆಪಿಯಿಂದ ದಾವಣಗೆರೆಯಲ್ಲಿ ಶೀಘ್ರ ಐತಿಹಾಸಿಕ ಕಾರ್ಯಕ್ರಮ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

Advertisement

ದಾವಣಗೆರೆ: ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಫೆಬ್ರುವರಿ ಕಡೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯಿಂದ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಸ್ಥಳ, ದಿನಾಂಕ ನಿಗದಿಯಾಗಿಲ್ಲ. ಆದರೆ, ನರೇಂದ್ರ ಮೋದಿ ಐತಿಹಾಸಿಕ ಕಾರ್ಯಕ್ರಮಕ್ಕೆ ಇಲ್ಲಿಗೆ ಬರಲಿದ್ದಾರೆ ಎಂದಷ್ಟೇ ಅವರು ತಿಳಿಸಿದರು.
ದೇಶದಲ್ಲಿ ೩೦ ದಿನಕ್ಕಾಗುವಷ್ಟು ೩೧ ಮಿಲಿಯನ್ ಟನ್‌ನಷ್ಟು ಕಲ್ಲಿದ್ದಲು ದಾಸ್ತಾನಿದ್ದು, ಅಷ್ಟರಲ್ಲಿಯೇ ಮತ್ತೆ ೧೫-೧೬ ದಿನಕ್ಕಾಗುವಷ್ಟು ಕಲ್ಲಿದ್ದಲು ಸಂಗ್ರಹವಾಗಲಿದೆ. ದೇಶದಲ್ಲಿ ಕಲ್ಲಿದ್ದಲು ಎಷ್ಟು ಬೇಕೋ ಅಷ್ಟು ಕೊಡಲು ಬದ್ಧರಿದ್ದೇವೆ. ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಹಾತ್ಮ ಗಾಂಧಿ ತಮ್ಮವರೆಂದು ಅಂದುಕೊಂಡಿದ್ದರೆ ಅದು ತಪ್ಪು. ಈಗಿನ ಗಾಂಧಿಗಳು ನಕಲಿಗಳು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಲೇ ಇಡೀ ಕಾಂಗ್ರೆಸ್ಸನ್ನೇ ವಿಸರ್ಜಿಸುವಂತೆ ಮಹಾತ್ಮ ಗಾಂಧಿ ಹೇಳಿದ್ದರು. ಆದರೆ, ಅದನ್ನೇ ಹರಿಪ್ರಸಾದ್‌ರಂತಹವರು ಮರೆತಿದ್ದಾರೆ ಎಂದು ಅವರು ಟೀಕಿಸಿದರು.
ಪ್ರಜಾಧ್ವನಿ ಎಂಬ ಹೆಸರಿನಡಿ ಕಾಂಗ್ರೆಸ್ಸಿನವರು ಬಸ್ಸು ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಇದೇ ಕಾಂಗ್ರೆಸ್ಸಿನವರು ರಾಜಸ್ಥಾನದಲ್ಲಿ ನೀಡಿದ್ದ ಭರವಸೆ ಏನಾಯಿತು? ಛತ್ತೀಸಘಡದಲ್ಲಿ ನೀಡಿದ್ದ ಆಶ್ವಾಸನೆ ಏನಾಯ್ತು? ತಾನೇ ಕೊಟ್ಟಂತಹ ಭರವಸೆಗಳನ್ನು ಈಡೇರಿಸದ ಪಕ್ಷ ಕಾಂಗ್ರೆಸ್. ಈಗ ಯಾತ್ರೆ ಕೈಗೊಂಡ ಕಾಂಗ್ರೆಸ್ಸಿನವರು ೫ ವರ್ಷ ಅಧಿಕಾರದಲ್ಲಿದ್ದಾಗ ಯಾಕೆ ಉಚಿತವಾಗಿ ೨೦೦ ಯೂನಿಟ್ ವಿದ್ಯುತ್ ನೀಡಲಿಲ್ಲ ಎಂದು ಅವರು ಪ್ರಶ್ನಿಸಿದರು.
ಈಗ ಪ್ರಜಾಧ್ವನಿ ಯಾತ್ರೆ ಮಾಡುತ್ತಿರುವ ಪಕ್ಷವೇ ತುರ್ತು ಪರಿಸ್ಥಿತಿಯನ್ನು ಹೇರಿ, ಸಂವಿಧಾನದ ಕತ್ತು ಹಿಸುಕಿ, ಚುನಾಯಿತ ಸರ್ಕಾರಗಳನ್ನು ಕಿತ್ತೊಸೆದು, ಕುಟುಂಬ ರಾಜಕಾರಣ ಮಾಡಿದೆ. ಅಪ್ರಬುದ್ಧ, ಅರೆಕಾಲಿಕ ರಾಜಕಾರಣಿ ನೇತೃತ್ವದ ಕಾಂಗ್ರೆಸ್ ಪಕ್ಷದಿಂದ ಯಾವುದೇ ಹೊಸದನ್ನೂ ನಿರೀಕ್ಷಿಸುವಂತಿಲ್ಲ. ರಾಜ್ಯ, ದೇಶದ ಜನತೆಯೂ ಇಂತಹ ಅಪ್ರಬುಬ್ಧ, ಅರೆಕಾಲಿಕ ನಾಯಕನ ನಾಯಕತ್ವದ ಕಾಂಗ್ರೆಸ್ ಪಕ್ಷದ ಬಗ್ಗೆ ಜಾಗೃತರಾಗಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದರು. ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ ಇತರರು ಇದ್ದರು.