ಗಣರಾಜ್ಯೋತ್ಸವ ನೌಕಾಪಡೆಯ ತುಕಡಿ ಮುನ್ನಡೆಸಲಿರುವ ಕನ್ನಡದ ಕುವರಿ

ನೌಕಾ ರಾಣಿ
Advertisement

ಮಂಗಳೂರು: ಕನ್ನಡ ಕುವರಿ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ಮಂಗಳೂರು ಬೋಳೂರಿನ ದಿಶಾ ಅಮೃತ್ ಅವರು ನವದೆಹಲಿಯಲ್ಲಿ ಕರ್ತವ್ಯಪಥದಲ್ಲಿ ಜ. ೨೬ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿದ್ದಾರೆ.
ದಿಶಾ ಅಮೃತ್ ಅವರು ಮಂಗಳೂರಿನ ಬೋಳೂರು ಸಮೀಪದ ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ದಂಪತಿಯ ಪುತ್ರಿ. ಇವರು ೨೦೧೬ ರಲ್ಲಿ ನೌಕಾಪಡೆಗೆ ಸೇರಿದ್ದು, ೨೦೧೭ ರಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ದಿಶಾ ಅಮೃತ್ ಅವರು ಮುನ್ನಡೆಸುವ ನೌಕಾಪಡೆ ತಂಡವು ೧೪೪ ಯುವ ನಾವಿಕರನ್ನು ಒಳಗೊಂಡಿದ್ದು, ನಾರಿ ಶಕ್ತಿ ಸ್ತಬ್ಧಚಿತ್ರ ಇರಲಿದೆ. ಇದರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಐವರು ಪುರುಷ ಅಗ್ನಿವೀರ್‌ಗಳು ಭಾಗವಹಿಸಲಿದ್ದಾರೆ. ದಿಶಾ ಅಮೃತ್ ಅವರ ಜೊತೆಗೆ ಮತ್ತೊಬ್ಬ ಮಹಿಳಾ ಅಧಿಕಾರಿ, ಸಬ್ ಲೆಫ್ಟಿನೆಂಟ್‌ನಲ್ಲಿ ಮೀನಾ ಎಸ್ ಕೂಡಾ ಜೊತೆಯಲ್ಲಿರಲಿದ್ದಾರೆ.
ಹೆಮ್ಮೆ ಪಡುತ್ತೇನೆ..
‘ನನ್ನ ತಂದೆ ಕೂಡ ಸೇನೆಯ ಭಾಗವಾಗಿರಲು ಬಯಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ನಾನು ಇಂದು ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆಪಡುತ್ತೇನೆ ಮತ್ತು ನೌಕಾಪಡೆಗೆ ಪೂರ್ಣ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುತ್ತೇನೆ, ಇದೊಂದು ಹೆಮ್ಮೆ. ನನ್ನ ಬಹುಕಾಲದ ಕನಸು ಈಡೇರಿದೆ, ಇದು ಯುವಜನತೆಗೆ ಪ್ರೇರಣೆಯಾಗಲಿ ಎಂದು ದಿಶಾ ಹೇಳಿದ್ದಾರೆ.
೨೯ರ ಹರೆಯದ ದಿಶಾ ಅಮೃತ್ ಲೆಫ್ಟಿನೆಂಟ್ ಕಮಾಂಡರ್ ನೌಕಾ ವಾಯು ಕಾರ್ಯಾಚರಣೆಯ ಅಧಿಕಾರಿಯಾಗಿದ್ದು, ಅಂಡಮಾನ ಮತ್ತು ನಿಕೋಬಾರ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ೨೦೦೮ರಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನ ಗಣರಾಜ್ಯೋತ್ಸವ ತಂಡದ ಭಾಗವಾಗಿದ್ದರು.
ಸಂತಸದ ಸಂಗತಿ..
ನನ್ನ ಮಗಳು ದಿಶಾ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನೌಕಾ ಪಡೆಯ ತುಕಡಿ ಮುನ್ನಡೆಸಲು ಆಯ್ಕೆಯಾದದ್ದು ಸಂತಸ ತಂದಿದೆ. ನೌಕಾಪಡೆಯ ಬಗ್ಗೆ ನನಗೆ ಮತ್ತು ಪತ್ನಿಗೆ ವಿಶೇಷ ಆಸಕ್ತಿ ಇದೆ. ಆದರೆ ಆ ಕಾಲದಲ್ಲಿ ನಮಗೆ ಸಾಧ್ಯವಾಗಲಿಲ್ಲ. ಈಗ ನಮ್ಮ ಆಸೆಯನ್ನು ಮಗಳು ಈಡೇರಿಸಿದ್ದಾಳೆ ಎಂಬುದೇ ಸಂತಸದ ಸಂಗತಿ’ ದಿಶಾ ತಂದೆ ಅಮೃತ್ ಹೇಳಿದ್ದಾರೆ.