ಖರ್ಗೆಯವರನ್ನು ಇಂದಿಗೂ ಒಪ್ಪುತ್ತಿಲ್ಲ

Advertisement

ಧಾರವಾಡ: ಕಾಂಗ್ರೆಸ್ಸಿಗರು ಇಂದಿಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಪಕ್ಷದ ಅಧ್ಯಕ್ಷ ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ. ಚುನಾಯಿತ ಪ್ರತಿನಿಧಿಯಾದ ಖರ್ಗೆ ಅವರು ಕೇವಲ ಹೆಸರಿಗಷ್ಟೇ ಎನ್ನುವಂತಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಟ್ಟು ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರ ವಿಚಾರಗಳನ್ನು ಪ್ರಚಾರ ಮಾಡುತ್ತೇವೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ ಎಂದರು.
ಕರಾವಳಿ ಭಾಗ ಹಿಂದುತ್ವದ ಲ್ಯಾಬರೋಟರಿ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕರಾವಳಿ ಹಿಂದುತ್ವದ ಲ್ಯಾಬರೋಟರಿ ಆಗಬಾರದಾ..? ಸಿದ್ದರಾಮಯ್ಯನವರು ಹಿಂದುತ್ವದ ವಿರೋಧಿನಾ..? ಸಿದ್ದರಾಮಯ್ಯನವರು ಮೂಲತಃ ದ್ವಂದ್ವದಲ್ಲಿದ್ದಾರೆ. ಅವರ ಕ್ಷೇತ್ರ ಯಾವುದು ಎಂಬ ಕನ್‌ಪ್ಯೂಶನ್‌ನಲ್ಲಿ ಅವರು ಏನೇನೋ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಉತ್ತಮ ರಾಜಕಾರಣಿ ಎಂಬ ಭಾವನೆ ನಮ್ಮಲ್ಲಿತ್ತು. ಆದರೆ, ಇತ್ತೀಚೆಗೆ ಅವರು ಸೋತ ನಂತರ ಅವರಿಗೆ ಕ್ಷೇತ್ರವೇ ಇರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ರಾಹುಲ್ ಗಾಂಧಿ ಸಹವಾಸದಲ್ಲಿರುವುದರಿಂದ ಏನೇನೋ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮೋದಿ ಅವರು ಒಬ್ಬ ಚುನಾಯಿತ ಪ್ರತಿನಿಧಿ. ಅವರು ನೇಮಕವಾಗಿ ಬಂದವರಲ್ಲ. ಗಾಂಧಿ ಪರಿವಾರದಿಂದ ಬಂದು ಅವರು ಪ್ರಧಾನಿ ಆಗಿಲ್ಲ. ಜನ ಅವರನ್ನು ಸ್ವೀಕಾರ ಮಾಡಿದ್ದಾರೆ ಎಂದರು.