ಫೆ. 5ರಿಂದ ಕರಾವಳಿ ಮಲೆನಾಡು ಧ್ವನಿ ಯಾತ್ರೆ

ಸುರ್ಜೇವಾಲಾ
Advertisement

ಮಂಗಳೂರು: ರಾಜ್ಯ ಕಾಂಗ್ರೆಸ್ ನಡೆಸಿರುವ ಪ್ರಜಾಧ್ವನಿ ಯಾತ್ರೆಯ ಮಾದರಿಯಲ್ಲೇ ಕರಾವಳಿ, ಮಲೆನಾಡಿನ ಆರು ಜಿಲ್ಲೆಗಳಿಗೆ ಪ್ರತ್ಯೇಕ ‘ಕರಾವಳಿ ಮಲೆನಾಡು ಧ್ವನಿ ಯಾತ್ರೆ’ಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದಾರೆ.
ದ.ಕ, ಉಡುಪಿ ಸೇರಿದಂತೆ ಪಕ್ಷದ 6 ಜಿಲ್ಲೆಗಳ ಮುಖಂಡರೊಂದಿಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಯಾತ್ರೆ ಕುರಿತು ಮಾಹಿತಿ ನೀಡಿದರು.
ಫೆಬ್ರವರಿ ೫ರಂದು ಸುಳ್ಯದಿಂದ ಆರಂಭವಾಗಲಿದೆ, ಫೆ. ೫ರಿಂದ ೯ರ ವರೆಗೆ ಮೊದಲ ಹಂತದ ಯಾತ್ರೆ ನಡೆಯಲಿದೆ, ಫೆ.೧೦ರಿಂದ ೧೫ರ ವರೆಗೆ ವಿಧಾನ ಮಂಡಲ ಅಧಿವೇಶನ ಇರುವುದರಿಂದ ಯಾತ್ರೆ ಇರುವುದಿಲ್ಲ, ಫೆ. ೧೬ರಿಂದ ಮತ್ತೆ ಮಾರ್ಚ್ ೧೦ರ ವರೆಗೆ ನಿರಂತರವಾಗಿ ನಡೆಯಲಿದೆ. ದ.ಕ., ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಸಂಚರಿಸಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೂ ನಾಯಕರು ತೆರಳಿ ಸಭೆ ನಡೆಸಲಿದ್ದಾರೆ ಎಂದರು.
ಯಾತ್ರೆಯ ನೇತೃತ್ವವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಹಿರಿಯ ಮುಖಂಡರಾದ ಆರ್.ವಿ.ದೇಶಪಾಂಡೆ, ರಮಾನಾಥ ರೈ, ಯು.ಟಿ. ಖಾದರ್, ಅಭಯಚಂದ್ರ ಜೈನ್, ಮಧು ಬಂಗಾರಪ್ಪ, ವಿನಯ ಕುಮಾರ್ ಸೊರಕೆ ಮತ್ತಿತರರು ವಹಿಸಲಿದ್ದಾರೆ ಎಂದರು.
ಪ್ರಗತಿ ಹಾಗೂ ಕೋಮು ಸೌಹಾರ್ದತೆಯ ಅಜೆಂಡಾವನ್ನು ಮುಂದಿಟ್ಟು ಈ ಯಾತ್ರೆ ನಡೆಯಲಿದ್ದು, ಬಿಜೆಪಿಯ ಕೋಮು ಧ್ರುವೀಕರಣದ ರಾಜಕೀಯವನ್ನು ಬಯಲು ಮಾಡುತ್ತೇವೆ, ಉತ್ತರ ಕನ್ನಡದ ಪರೇಶ್ ಮೇಸ್ತ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಮೇಲೆ ಸುಳ್ಳು ಆಪಾದನೆ ಮಾಡಿದ್ದ ಬಿಜೆಪಿಯ ಮುಖಂಡರು ಸಿಬಿಐ ವರದಿ ಬಹಿರಂಗವಾದ ಬಳಿಕ ಮಾತೇ ಆಡುತ್ತಿಲ್ಲ, ಇದನ್ನು ಜನರಿಗೆ ತಿಳಿಸುತ್ತೇವೆ. ಅವರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟರೆ ನಾವು ಕರಾವಳಿಯನ್ನು ಐಟಿ, ಜವಳಿ ಹಬ್ ಮಾಡುವ ಬಗ್ಗೆ ಮಾತನಾಡುತ್ತೇವೆ, ಕರಾವಳಿ ಸಂಬಂಧಿಸಿ ಕಳೆದ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆಯ ಶೇ. ೯೫ ಕೂಡಾ ಈಡೇರದಿರುವುದನ್ನು ತಿಳಿಸುತ್ತೇವೆ ಎಂದರು.