ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಿ

Advertisement

ಉಡುಪಿ: ಜೀವನದ ಔನ್ನತ್ಯಕ್ಕೆ ಶಿಕ್ಷಣ ಬಹಳ ಮುಖ್ಯ. ಜೊತೆಗೆ ಉತ್ತಮ ಸಂಸ್ಕಾರವೂ ಅಷ್ಟೇ ಮುಖ್ಯ. ಆದ್ದರಿಂದ ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಯು. ಬಿ. ವೆಂಕಟೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗಣರಾಜ್ಯೋತ್ಸವ ಅಂಗವಾಗಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಬಳಿಕ ಶಾಲಾ ಶತಮಾನೋತ್ತರ ಸುವರ್ಣ ಸಂಭ್ರಮ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಓದಿನ ಕಡೆಗೆ ಗಮನ ಕೊಡಬೇಕು. ಅಂತೆಯೇ ತಮ್ಮ ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕಥೆಯೊಂದನ್ನು ಹೇಳುವ ಮೂಲಕ ಮಾರ್ಮಿಕವಾಗಿ ತಿಳಿಸಿದರು.
ಮುಂದಿನ ಪ್ರಜೆಗಳಾಗಿರುವ ಇಂದಿನ ಮಕ್ಕಳು ನಮ್ಮ ದೇಶದ ಬಗ್ಗೆಯೂ ಅರಿತುಕೊಳ್ಳಬೇಕು ಎಂದರು.
ಕನ್ನಡ ಶಾಲೆಗಳನ್ನು ಉಳಿಸುವುದೇ ಕಷ್ಟಕರವಾಗಿರುವ ಈ ದಿನಗಳಲ್ಲಿ 162 ವರ್ಷಗಳಷ್ಟು ಪುರಾತನವಾದ ಈ ಶಾಲೆಯಲ್ಲಿ ದೇಶದ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಕ್ಕಳೊಂದಿಗೆ ಆಚರಿಸುವ ಅವಕಾಶ ಲಭಿಸಿರುವುದು ಸಂತಸ ತಂದಿದೆ. ತಮ್ಮ ತಂದೆಯವರೂ ಸೇರಿದಂತೆ ರಾಜ್ಯಸಭಾ ಮಾಜಿ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮೊದಲಾದವರು ಕಲಿತ ಈ ಶಾಲೆಯ ಬಗ್ಗೆ ಹೆಮ್ಮೆ ಇದೆ.
ಸುಮಾರು 2,500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಸಮೃದ್ಧ ಭಾಷೆ. ಅತ್ಯಂತ ಹೆಚ್ಚು ಮಾತನಾಡುವ ಭಾಷೆಗಳ ಪೈಕಿ ಕನ್ನಡಕ್ಕೆ 28ನೇ ಸ್ಥಾನವಿದೆ. 8 ಮಂದಿ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಭಾಷೆ ಕನ್ನಡ ಎಂದು ಯು. ಬಿ. ವೆಂಕಟೇಶ್ ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕಿಯಾಗಿ ಆಯ್ಕೆಯಾಗಿರುವ ಶಾಲಾ ಹಳೆವಿದ್ಯಾರ್ಥಿನಿ ಅಶ್ವಿತಾ ವಿ. ಅಮೀನ್ ಅವರನ್ನು ಶಾಸಕ ಯು. ಬಿ. ವೆಂಕಟೇಶ್ ಸನ್ಮಾನಿಸಿದರು.
ಸನ್ಮಾನಕ್ಕುತ್ತರಿಸಿದ ಅಶ್ವಿತಾ ವಿ. ಅಮೀನ್, ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ. ತಾನು ಕನ್ನಡ ಮಾಧ್ಯಮದಲ್ಲೇ ಕಲಿತು ಈ ಹಂತವನ್ನು ತಲುಪಿರುವುದಾಗಿ ತಿಳಿಸಿದರು. ಸೋಲನ್ನು ಸವಾಲಾಗಿ ಸ್ವೀಕರಿಸಿ, ನಿಗದಿತ ಗುರಿ ಸಾಧನೆಯಲ್ಲಿ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದರು.
ಶಾಲಾ ಸಂಚಾಲಕ ಯು. ಸುರೇಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಡಾ. ತ್ರಿವೇಣಿ ವೇಣುಗೋಪಾಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಕುಮಾರ್, ಮಾಜಿ ಅಧ್ಯಕ್ಷ ನಾಗೇಶಕುಮಾರ್ ಉದ್ಯಾವರ, ಶಾಲಾ ನಾಯಕ ರಕ್ಷಿತ್ ಆಚಾರ್ಯ, ವಿಶಾಲಾಕ್ಷಿ ಯು. ಬಿ. ವೆಂಕಟೇಶ್ ವೇದಿಕೆಯಲ್ಲಿದ್ದರು.
ಮುಖ್ಯ ಶಿಕ್ಷಕಿ ಹೇಮಲತಾ ಸ್ವಾಗತಿಸಿ, ಶಿಕ್ಷಕಿ ಅನುರಾಧ ಶೆಟ್ಟಿ ವಂದಿಸಿದರು. ಶಾಲಾಡಳಿತ ಸಮಿತಿ ಅಧ್ಯಕ್ಷ ಗಣಪತಿ ಕಾರಂತ ಪ್ರಸ್ತಾವನೆಗೈದರು. ಶಿಕ್ಷಕಿ ಅನುರಾಧ ಸನ್ಮಾನಪತ್ರ ವಾಚಿಸಿದರು. ಸಹಶಿಕ್ಷಕ ಯು. ವಿಕ್ರಮ್ ಆಚಾರ್ಯ ನಿರೂಪಿಸಿದರು