ಮುಂದಿನ ಆಯವ್ಯಯದಲ್ಲಿ ವಿಕಲಚೇತನರಿಗೆ ಆದ್ಯತೆ: ಬೊಮ್ಮಾಯಿ

cm
Advertisement

ಮೈಸೂರು(ನಂಜನಗೂಡು): ಮುಂದಿನ ಆಯವ್ಯಯದಲ್ಲಿ ವಿಕಲಚೇತನರಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ನಂಜನಗೂಡಿನಲ್ಲಿ ಆಯೋಜಿಸಿರುವ “ಸಾಮಾಜಿಕ ಅಧಿಕಾರಿತಾ ಶಿಬಿರ” ಹಾಗೂ ಕೇಂದ್ರ ಸರ್ಕಾರದ ವಿಶೇಷ ಅಡಿಪ್(ಎಡಿಐಪಿ) ಯೋಜನೆಯಡಿ “ಉಚಿತ ಸಾಧನ ಸಲಕರಣೆಗಳ ವಿತರಣೆ” ಮಾಡಿ ಮಾತನಾಡಿದರು.
ಕೇಂದ್ರದ ಮಾಜಿ ಸಚಿವ, ಹಿರಿಯ ನಾಯಕರಾದ ಶ್ರೀನಿವಾಸ ಪ್ರಸಾದ್ ಅವರು ಮಾನವೀಯತೆ ಮೆರೆದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಅರ್ಹ ಜನರಿಗೆ ತಲುಪಿಸುವ ಕೆಲಸವನ್ನು ಸಾಮಾನ್ಯವಾಗಿ ಯುವ ನಾಯಕರು ಮಾಡುತ್ತಾರೆ. ಆದರೆ ಹಿರಿಯ ನಾಯಕರಾದ ಶ್ರೀನಿವಾಸ ಪ್ರಸಾದ್ ಅವರು ಸ್ವಂತ ಆಸಕ್ತಿಯಿಂದ ಕ್ಯಾಂಪ್‌ಗಳನ್ನು ಆಯೋಜಿಸಿ, ಅಂಗವಿಕಲರನ್ನು ಗುರುತಿಸಿ ಅವರಿಗೆ ಸಾಧನ–ಸಲಕರಣೆಗಳನ್ನು ಒದಗಿಸಿರುವುದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದು ಅಭಿನಂದಿಸಿದರು.
ಅಂಗವಿಕಲತೆ ಮನಸಿನ ಪೀಡೆಯಾಗಬಾರದು. ದೇವರು ಒಂದು ಅಂಗದಲ್ಲಿ ಸ್ವಲ್ಪ ವಿಕಲತೆ, ಕೊರತೆ ಕೊಟ್ಟರೆ, ಇನ್ನೊಂದರಲ್ಲಿ ತುಂಬಿ ಕೊಡುತ್ತಾನೆ. ನಾವೆಲ್ಲ ಕಣ್ಣಿದ್ದವರು ದೃಷ್ಟಿ ಹಾಯಿಸುವವರೆಗೆ ನೋಡಬಹುದು. ಕಣ್ಣಿಲ್ಲದವರು ನಮ್ಮನ್ನೂ ಮೀರಿಸಿ ಇಡೀ ಜಗತ್ತನ್ನು ನೋಡುವ ದಿವ್ಯದೃಷ್ಟಿ ಹೊಂದಿರುತ್ತಾರೆ. ನಮಗೆ ಒಳಗಣ್ಣು ಇಲ್ಲ, ದಿವ್ಯ ದೃಷ್ಟಿ ಇಲ್ಲ. ಈಗ ಯಾರು ಅಂಗವಿಕಲರೆಂದು ನೀವು ತೀರ್ಮಾನ ಮಾಡಿ ಎಂದು ಮಾರ್ಮಿಕವಾಗಿ ಹೇಳಿದರು.
ನಿಮ್ಮ ಹೃದಯ ಯಾವ ರೀತಿ ಮಿಡಿಯುತ್ತದೆ. ಭಾವನೆಗಳು ಯಾವ ರೀತಿ ಇರುತ್ತದೆ. ಮಾನವೀಯತೆ ಇದೆಯೆಂಬುದನ್ನು ಪರೀಕ್ಷೆ ಮಾಡಲು ಅಂಗವಿಕಲತೆಯನ್ನು ಕೊಟ್ಟಿರುತ್ತಾನೆ. ಇದು ಅವರ ಪರೀಕ್ಷೆ ಅಲ್ಲ, ನಮ್ಮ ಪರೀಕ್ಷೆ. ಅವರು ದೇವರ ಮಕ್ಕಳು. ಆದ್ದರಿಂದ ವಿಕಲಚೇತನರು ಯಾವುದೇ ಕೀಳರಿಮೆ ಬೆಳೆಸಿಕೊಳ್ಳುವ ಅಗತ್ಯವಿಲ್ಲ ಎಂದರು.