ಮೂರು ದಿನಗಳ ಹಂಪಿ ಉತ್ಸವಕ್ಕೆ ತೆರೆ

ಹಂಪಿ ಉತ್ಸವ
Advertisement

ಬಳ್ಳಾರಿ: ವಿಜಯಗರ ಸಾಮ್ರಾಜ್ಯದ ಗತ ವೈಭವ ಸಾರುವ ಮೂರು ದಿನಗಳ ಹಂಪಿ ಉತ್ಸವಕ್ಕೆ ಭಾನುವಾರ ವೈಭವದ ತೆರೆ ಬಿದ್ದಿದೆ.
ಜ. 27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ ವಿಜಯನಗರ ಜಿಲ್ಲೆಯ ಚೊಚ್ಚಲ ಹಂಪಿ ಉತ್ಸವಕ್ಕೆ ಮೊದಲ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಶನಿವಾರ, ಭಾನುವಾರ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ನಾಲ್ಕು ವೇದಿಕೆಗಳಲ್ಲಿ ಜಾನಪದ ಕಲೆ, ಯಕ್ಷಗಾನ, ಬಯಲಾಟ, ನಾಟಕ, ರಂಗಗೀತೆ ಗಾಯನ, ಶಾಸ್ತ್ರೀಯ ಸಂಗೀತ, ನೃತ್ಯ, ಬಂಬೂ ಫ್ಯೂಜನ್ ಸಂಗೀತ, ರಸಮಂಜರಿ ಹೀಗೆ ಎಲ್ಲ ರೀತಿಯ ಕಲೆಗಳ ಅನಾವರಣಕ್ಕೆ ನಾಲ್ಕು ವೇದಿಕೆಗಳು ಸಾಕ್ಷಿಯಾದವು. ವಿಶೇಷವಾಗಿ ಸಾಹಸ ಕ್ರೀಡೆಗಳಲ್ಲಿ ವಿದೇಶಿಯರು ಸಕ್ರಿಯವಾಗಿ ಪಾಲ್ಗೊಂಡು ಹಂಪಿ ಉತ್ಸವದ ಭಾಗವಾಗಿದ್ದು ಎದ್ದು ಕಂಡಿತು.
ಜರ್ಮನಿ, ಜಪಾನ್, ಫ್ರಾನ್ಸ್ ಸೇರಿದಂತೆ ವಿವಿಧ ಪಾಶ್ಚಾತ್ಯ ರಾಷ್ಟ್ರಗಳ ಪ್ರಜೆಗಳು ಉತ್ಸವದ ಹಲವು ಕಾರ್ಯಕ್ರಮಗಳಲ್ಲಿ ತಮಗರಿವಿಲ್ಲದೆ ಭಾಗಿಯಾಗಿ ಗಮನ ಸೆಳೆದರು. ಉತ್ಸವದಲ್ಲಿ ಪಾಲ್ಗೊಂಡ ಜರ್ಮನಿಯ ರೋಮನ್, ವಿನ್ಸ್ಜೀಟೊಯೋ ಅವರ ಮಾತಿನಲ್ಲಿ ಹಂಪಿ ಉತ್ಸವ ಎಂಬುದು ವಿದೇಶಿಯರ ಪಾಲಿಗೆ ಅಚ್ಚರಿಯೇ ಸರಿ. ನಾವೆಲ್ಲ ಸಂಗೀತ, ನೃತ್ಯ ಮಾಡುವುದು ನಮ್ಮ ಮೋಜಿಗೆ. ಆದರೆ, ಇಲ್ಲಿ ಹಂಪಿ ಉತ್ಸವದಲ್ಲಿ ಮೂಡಿ ಬಂದ ಇಲ್ಲಿನ ಸ್ಥಳೀಯ ಸಂಗೀತ, ನೃತ್ಯಗಳೆಲ್ಲ ಧರ್ಮಾನುಸಾರ ನಡೆಸುವ ಭಕ್ತಿ ಆಚರಣೆಗಳು ಎಂಬುದು ತಿಳಿದು ಅಚ್ಚರಿ ಎನ್ನಿಸಿತು. ಭಾರತದ ಈ ಕಲಾ ಪ್ರಕಾರ ನಮ್ಮಲ್ಲಿ ಸಿಗದು ಎನ್ನುತ್ತಾರೆ ಈ ಇಬ್ಬರು. ಇನ್ನು ಸಾಹಸ ಕ್ರೀಡೆಯಲ್ಲಿ ತೊಡಗಿದ ವಿದೇಶಿಯರು ಉತ್ಸವದ ಜಲಕ್ರೀಡೆ, ಸಾಹಸ ಕ್ರೀಡೆ, ಕುಸ್ತಿ, ಕಬಡ್ಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.