ಇಬ್ಬರ ಸಾವಿಗೆ ಕಾರಣಕರ್ತನಾಗಿ
ಪರಾರಿಯಾಗಿದ್ದ ಕಾರು ಚಾಲಕನ ಬಂಧನ

Advertisement

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ೬೬ರ ಮೂಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಕಾರುಡಿಕ್ಕಿ ಹೊಡೆದು ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕಾರು ಸಮೇತ ಚಾಲಕನನ್ನು ಬಂಧಿಸಿದ್ದಾರೆ
ಆರೋಪಿ ಕಾರು ಚಾಲಕನನ್ನು ಹಳೆಯಂಗಡಿ ಇಂದ್ರ ನಗರ ನಿವಾಸಿ ಅರ್ಪಿತ್ ಎಂದು ಗುರುತಿಸಲಾಗಿದ್ದು ಈತ ತುಳು ಸ್ಟ್ಯಾಂಡ್ ಆಫ್ ಕಾಮಿಡಿ ಯೂಟ್ಯೂಬರ್ ಎಂದು ತಿಳಿದು ಬಂದಿದೆ.
ಮಧ್ಯಪ್ರದೇಶದ ಇಂದೋರ್‌ನಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿ ಪಡುಪಣಂಬೂರು ಬಳಿ ಟಯರ್ ಪಂಚರ್ ಆಗಿದ್ದು, ಲಾರಿಯಲ್ಲಿದ್ದ ಮಧ್ಯಪ್ರದೇಶ ನಿವಾಸಿಗಳಾದ ಬಬುಲು(೨೩), ಆಚಲ್ ಸಿಂಗ್ (೩೦) ಹಾಗೂ ಕೇರಳ ನಿವಾಸಿ ಅನೀಶ್(೪೨) ಎಂಬವರು ಕೆಳಗಿಳಿದು ಹೆದ್ದಾರಿ ಬದಿಯಲ್ಲಿ ಟಯರ್ ತೆಗೆದು ದುರಸ್ತಿ ಮಾಡುತ್ತಿದ್ದಂತೆ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗದಿಂದ ಚಲಿಸಿದ ಕಾರು ಲಾರಿಯ ಟಯರ್ ದುರಸ್ತಿ ಮಾಡುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಪಘಾತ ರಭಸಕ್ಕೆ ಬಬುಲು ಎಂಬಾತ ಸ್ಥಳದಲ್ಲಿ ಮೃತಪಟ್ಟರೆ, ಇನ್ನೋರ್ವ ಅಚಲ್ ಸಿಂಗ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಇನ್ನೋರ್ವ ಗಾಯಾಳು ಅನಿಶ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.
ಮೂವರಿಗೆ ಡಿಕ್ಕಿ ಹೊಡೆದ ಕಾರು ಸ್ಥಳದಿಂದ ಪರಾರಿಯಾಗಿದ್ದು, ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.